1898-1979. ಪ್ರಸಿದ್ಧ ಶಾಸನ ತಜ್ಞ, ಸಂಶೋಧಕ. ಪೂರ್ಣಹೆಸರು ನೆಲಮಂಗಲ ಲಕ್ಷ್ಮೀನಾರಾಯಣರಾವ್. ಮೈಸೂರು ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿ ಪಡೆದು(1920), ಭಾರತದ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಶಾಸನ ಸಂಶೋಧನ ವಿಭಾಗದಲ್ಲಿ ಕನ್ನಡ ಶಾಸನ ಸಂಶೋಧನ ವಿದ್ಯಾರ್ಥಿಯಾಗಿ ಸೇರಿದರು(1921). ಶಾಸನಗಳ ಬಗ್ಗೆ ಕ್ಷೇತ್ರಕಾರ್ಯ ನಡೆಸಿ ಕನ್ನಡ ಶಾಸನಗಳ ಅಧ್ಯಯನದಲ್ಲಿ ನಿರತರಾದರು. ಹಲವಾರು ವೀರಗಲ್ಲುಗಳನ್ನೂ ರಾಮರೆಡ್ಡಿ ಪಲ್ಲೆಯ ಬೌದ್ಧ ನಿವೇಶನವನ್ನೂ ಅಲ್ಲೂರಿನ ಬ್ರಾಹ್ಮೀ ಶಾಸನವನ್ನೂ ಕಂಡುಹಿಡಿದರು. ಹಿಂದಿನ ಬೊಂಬಾಯಿ ಕರ್ನಾಟಕ ಭಾಗಗಳಲ್ಲಿ ಕ್ರಮ ಬದ್ಧವಾದ ಗ್ರಾಮವಾರು ಸರ್ವೇಕ್ಷಣೆ ಕಾರ್ಯಕ್ಕಾಗಿ ನೇಮಕಗೊಂಡು (1926), ಅನಂತರ ಭಾರತ ಸರ್ಕಾರದ ಶಾಸನತಜ್ಞರ ಸಹಾಯಕನಾಗಿ ಉದಕಮಂಡಲದಲ್ಲಿ ಕೆಲಸಮಾಡಿದರು. ಇವರು ದೇಶದ ಬಗ್ಗೆ ಸಿದ್ಧ ಗೊಳಿಸಿದ ಶಾಸನ ವಿಮರ್ಶೆಗಳು ಭಾರತದ ಪುರಾತತ್ವ ಸರ್ವೇಕ್ಷಣೆಯ ವಾರ್ಷಿಕ ವರದಿಗಳಲ್ಲಿ ಪ್ರಕಟವಾಗಿವೆ. ಬೊಂಬಾಯಿ ಕರ್ನಾಟಕ ಪ್ರದೇಶದ ಶಾಸನಗಳ ಬಗ್ಗೆ ಫ್ಲೀಟ್ ಅವರು ಸಿದ್ಧಗೊಳಿಸಿದ್ದ ಹಳೆಯ ಸಂಗ್ರಹಗಳನ್ನೂ ಈ ಕಾಲದಲ್ಲಿ ಇವರು ಪಟ್ಟಿಮಾಡಿದರು. ದಕ್ಷಿಣ ಭಾರತದ 6ನೆಯ ಮತ್ತು 7ನೆಯ ಸಂಪುಟಗಳನ್ನು ತಯಾರಿಸುವುದರಲ್ಲಿ ನೆರವು ನೀಡಿದಲ್ಲದೆ, ಅದೇ ಶಾಸನ ಗ್ರಂಥ ಮಾಲಿಕೆಯ 9ನೆಯ ಸಂಪುಟದ 1ನೆಯ ಮತ್ತು 2ನೆಯ ಭಾಗಗಳು, 11ನೆಯ ಸಂಪುಟದ ಭಾಗ 1- ಇವುಗಳ ಸಂಪಾದನ ಕಾರ್ಯದಲ್ಲಿ ಸಹಾಯ ನೀಡಿದರು. ಸಂಪುಟ 10ರ ಅನುಬಂಧವನ್ನು ತಯಾರಿಸಿದರು. ಬೊಂಬಾಯಿ ಕರ್ನಾಟಕ ಪ್ರದೇಶದಲ್ಲಿ ಪ್ರತಿಮಾಡಿಕೊಂಡು 6ನೆಯ ವಿಕ್ರಮಾದಿತ್ಯನ ಎಲ್ಲ ಶಾಸನಗಳನ್ನೂ ಒಳಗೊಂಡ ಸಂಪುಟ 11-ಭಾಗ 2ರ ಸಂಪಾದನೆಯನ್ನು ಮಾಡಿದರು. ಅನಂತರ 1943ರಲ್ಲಿ ಶಾಸನ ಇಲಾಖೆಯ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಹುದ್ದೆಗೆ ನೇಮಕಗೊಂಡರು. 1947ರಲ್ಲಿ ಸೂಪರಿಂಟೆಂಡಿಂಗ್ ಎಪಿಗ್ರಾಫಿಸ್ಟರಾಗಿ ಬಡ್ತಿ ಪಡೆದರು. 1953ರಲ್ಲಿ ಭಾರತ ಸರ್ಕಾರದ ಶಾಸನತಜ್ಞರಾಗಿ ನೇಮಕವಾಗಿ, ಅವಧಿಗೆ ಸಂಬಂಧಪಟ್ಟ ದಕ್ಷಿಣ ಭಾರತದ ಶಾಸನಗಳ ವಾರ್ಷಿಕ ವರದಿಗಳನ್ನು ಪ್ರಕಟಿಸಿದರು (1939-43 ಮತ್ತು 1943-45). ಅನಂತರ ಭಾರತ ಶಾಸನಗಳ ವಾರ್ಷಿಕ ವರದಿಯನ್ನು ಪ್ರಕಟಿಸಿದರು (1947-51). 1955ರಲ್ಲಿ ಕೆಲಸದಿಂದ ನಿವೃತ್ತರಾದರು. ಅನಂತರ ವಿಶೇಷ ಅಧಿಕಾರಿಯಾಗಿ ಪುನರ್ ನೇಮಕಗೊಂಡರು (1956). ಆಗ ಇವರು ದಕ್ಷಿಣ ಭಾರತದ ಶಾಸನಗಳ 18ನೆಯ ಸಂಪುಟ ವನ್ನು ಸಿದ್ಧಗೊಳಿಸಿದರು. ಇದರಲ್ಲಿ 1932-35ರಲ್ಲಿ ಬೊಂಬಾಯಿ ಕರ್ನಾಟಕ ಭಾಗದಲ್ಲಿ ಪ್ರತಿಮಾಡಿಕೊಂಡ ಶಾಸನಗಳೂ ಸೇರಿವೆ. ಇವರು ‘ಎಪಿಗ್ರಾಫಿಯ ಇಂಡಿಕಾ’ ಸಂಪುಟಗಳಿಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಆರ್.ಎಸ್.ಪಂಚಮುಖಿಯವರೊಡನೆ “ಕರ್ನಾಟಕದ ಅರಸು ಮನೆತನಗಳು” ಎಂಬ ಗ್ರಂಥವನ್ನು ಪ್ರಕಟಿಸಿದರು. ಮಹಾರಾಷ್ಟ್ರ ಗೆಜೆಟಿಯರ್‍ನ ಪ್ರಾಚೀನ ಇತಿಹಾಸ ವಿಭಾಗಕ್ಕೆ ಬಾದಾಮಿಯ ಚಳುಕ್ಯರ ಬಗ್ಗೆ ಒಂದು ಅಧ್ಯಾಯನವನ್ನು ಬರೆದು ಕೊಟ್ಟರು(1967). ನೊಳಂಬರ ವಂಶಾವಳಿ ಮತ್ತು ಕಾಲಾನುಕ್ರಮ, ಇಕ್ಕೇರಿಯ ನಾಯಕರು ಎಂಬ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಮೈಸೂರು ಗೆಜೆಟಿಯರ್ ಪ್ರಕಟಣೆಯ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದರು. 1979 ಜನವರಿ 14ರಂದು ನಿಧನರಾದರು.
	
(ಕೆ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ